ಬದುಕಿಗಾಗಿ ಕಟ್ಟಡ ಕಾರ್ಮಿಕನಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ..!
08 May, 2024
ಅದೊಂದು ಲಿಂಕ್ ನನ್ನ ವಾಟ್ಸ್ಪ್ಗೆ ಬಂದಿತ್ತು. ಗೆಳೆಯ ಜೀವನ್ ರಾಮ್ ಮುಂಬೈನಿಂದ ಕಳಿಸಿದ್ದ. ಜೊತೆಗೆ ಒಂದು ಒಕ್ಕಣಿಕೆಯು ಇತ್ತು. ʻಈತ ನನಗೂ ನಿನಗೂ ಪರಿಚಿತ. ಅಂದು ನಾವು ಅವನನ್ನು ನೋಡುವುದಕ್ಕೆ ಸಮಯ ಕೇಳಿ ಹೋಗಿದ್ದೇವು. ಆದರೆ ಇಂದು ಅವನ ಸ್ಥಿತಿ ಗಾರೆ ಕೆಲಸಕ್ಕೆ ಸಿಮೆಂಟ್ ಮಿಶ್ರಣ ಮಾಡುತ್ತಿದ್ದಾನೆ ʼಎಂದು ಬರೆದಿದ್ದ. ವಾಟ್ಸ್ ಅಪ್ ಒಕ್ಕಣಿಕೆಯನ್ನು ನೋಡಿದ ತಕ್ಷಣ ಲಿಂಕ್ ಡೌನಲೋಡ್ ಮಾಡಿಕೊಂಡು ಸೂಕ್ಷ್ಮವಾಗಿ ವಿಡಿಯೋ ನೋಡುತ್ತಿದ್ದೆ.
ಸುಮಾರು ೭೦ರ ಹಿರಿಯ ಜೀವವೊಂದು ಬರಿ ಮೈಲ್ಲಿ ತಲೆಕೆಳಗೆ ಮಾಡಿಕೊಂಡು ಗುದ್ದಲಿಯಿಂದ ಸಿಮೆಂಟ್ ಮಿಶ್ರಣ ಮಾಡುವ ವಿಡಿಯೋ ಅದು. ತೆಲೆ ತುಂಬಾ ಕೂದಲು, ತಿದ್ದಿ ತೀಡಿದ ಬಿಳಿಯ ಮೀಸೆ. ಶ್ವೇತ ಬಣ್ಣದ ಬನಿಯನ್ ಹಾಗೂ ಪಂಚೆಯನ್ನು ಉಟ್ಟವನು ಸೊಂಟಕ್ಕೆ ಪಂಚೆ ಸುತ್ತಿಕೊಂಡು ಗಾರೆ ಮಿಶ್ರಣ ಮಾಡುತ್ತಿರುವುದು ಚಿತ್ರೀಕರಿಸಲಾಗಿತ್ತು. ಅದನ್ನು ಗಮನಿಸಿದ ನನಗೆ ಆಶ್ಚರ್ಯ, ಬೇಸರ, ಖೇದ ಎಲ್ಲವೂ ಒಮ್ಮೆಲೆ ಆಗಿ ಬಿಟ್ಟಿತ್ತು. ಕಾರಣ ಗಾರೆ ಕಲಿಸುತ್ತಿರುವ ವ್ಯಕ್ತಿ ಬೇರೆ ಯಾರೂ ಅಲ್ಲ, ಬದಲಾಗಿ ಅಂದು ನಾವು ಅವನಿಗಾಗಿ ಕಾದು ಕುಳಿತು ವಿಶೇಷ ಸಂದರ್ಶನ ಮಾಡಲಾದ ʻ
ದರ್ಶನಂ ಮೊಗಿಲಯ್ಯʼ ನವರು...!

ʻದರ್ಶನಂ ಮೊಗಿಲಯ್ಯʼ ನವರು ಎಂದರೆ ಪಕ್ಕನೆ ನೆನಪಿಗೆ ಬರುವುದು ಕಷ್ಟ. ಕಿನ್ನೆರಿ ಮೊಗಿಲಯ್ಯ ಎಂದರೆ ಕೆಲವರಿಗೆ ನೆನಪಾಗಬಹುದು. ಇನ್ನೂ ಬಹುಪಾಲು ಜನರಿಗೆ ʻಪದ್ಮಶ್ರೀ ಪುರಸ್ಕೃತರಾದ ದರ್ಶನಂ ಮೊಗಿಲಯ್ಯʼ ಎಂದರೆ ನೆನಪಿಗೆ ಬರುತ್ತಾರೆ. ಅವರು ಅಪರೂಪದ ಸಂಗೀತ ವಾದ್ಯ 'ಕಿನ್ನೆರ'ಕ್ಕೆ ಮರುಜೀವ ಕೊಟ್ಟವರು. ಜಾನಪದ ಕಲಾವಿದ ದರ್ಶನಂ ಮೊಗಿಲಯ್ಯ ಅವರು ಕಿನ್ನೆರ ವಾದ್ಯವನ್ನು ನುಡಿಸುವ ಐದನೇ ತಲೆಮಾರಿನ ಕಲಾವಿದರು. ಮೊಗಿಲಯ್ಯ ಅವರು ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ಲಿಂಗಲ ಮಂಡಲದ ಅವಸಲಿಕುಂಟಾದವರು.

ಜನಪದ ಕಿನ್ನೆರ ವಾದನ ಕಲೆಗೆ ರಾಷ್ಟ್ರೀಯ ಸ್ಥಾನಮಾನ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಇವರಿಗೆ 2022 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು. ಅಂತಹ ಮಹಾನ್ ಸಂಗೀತ ಸಾಧಕ ಈಗ ಹೈದ್ರಾಬಾದ್ ಬಳಿಯಲ್ಲಿ ಕಟ್ಟಡ ನಿರ್ಮಾಣದ ಸ್ಥಳದಲ್ಲಿ ದಿನಗೂಲಿ ನೌಕರನಾಗಿ ಗಾರೆ ಕೆಲಸಮಾಡಿ ದುಡಿದು ಜೀವನ ಸಾಗಿಸುವ ಸ್ಥಿತಿಗೆ ಬಂದಿದ್ದಾರೆ. ಈ ಮಾಹಿತಿ ಹಿನ್ನೆಲೆಯಲ್ಲಿ ಅವರನ್ನು ಮತ್ತೊಮ್ಮೆ ಮಾತನಾಡಿಸಬೇಕು ಎಂದು ಅವರಿಗೆ ಪೋನಾಯಿಸಿ ಮಾತನಾಡಿದೆ. ಹಿಂದೆ ಭೇಟಿಯಾಗಿದ್ದ ಬಗ್ಗೆ ಅವರೇ ನೆನಪಸಿಕೊಂಡು ತಮ್ಮ ನೋವುಗಳನ್ನು ನನ್ನಲ್ಲಿಯೂ ಅಲವತ್ತುಕೊಂಡರು.
2022 ರಲ್ಲಿ ಪದ್ಮಶ್ರೀ ಪುರಸ್ಕೃತರಾದ ಕಿನ್ನೆರ ಮೊಗಿಲಯ್ಯ ಎಂದೇ ಖ್ಯಾತರಾದ ದರ್ಶನಂ ಮೊಗಿಲಯ್ಯ ಅವರಿಗೆ ತೆಲಂಗಾಣಾ ರಾಜ್ಯ ಸರಕಾರ ಗೌರವ ಪಿಂಚಣಿ ನೀಡುತ್ತ ಬಂದಿತ್ತು. ಆದರೆ ಕಳೆದ ಐದು ತಿಂಗಳಿನಿಂದ ರಾಜ್ಯ ಸರ್ಕಾರದಿಂದ ಸಿಗುತ್ತಿದ್ದ ಮಾಸಿಕ ರೂ. 10,000 ಪಿಂಚಣಿ ಬರುತ್ತಿಲ್ಲ. ಪರಿಣಾಮ ದರ್ಶನಂ ಮೊಗಿಲಯ್ಯನವರು ತೀವ್ರ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ತಮ್ಮ ಉಪ ಜೀವನಕ್ಕೆ ಬೇರೆ ದಾರಿ ತೋಚದೆ ಗಾರೆ ಕೆಲಸಕ್ಕೆ ಮುಂದಾಗಿದ್ದಾರೆ ಎಂಬ ಮಾಹಿತಿಯನ್ನು ಅವರಿಂದಲೇ ಸ್ಪಷ್ಟಪಡಿಸಿಕೊಂಡೆ.
ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪಡೆದ ದೇಶದ ಕೆಲವೇ ಕೆಲವು ಸಾಧಕರಲ್ಲಿ ಮೊಗಿಲಯ್ಯ ಅವರು ಒಬ್ಬರು. ಪದ್ಮಶ್ರೀ ಪ್ರಶಸ್ತಿ ಎನ್ನುವುದು ಸಾಧಕನ ಪಾಲಿಗೆ ಅದೊಂದು ತಪಸ್ಸು ಎನ್ನುವ ಮಾತಿದೆ. ಅದರಂತೆ ಕಳೆದ ಎರಡು ವರ್ಷದ ಹಿಂದೆ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ಸಾಧಕರೊಬ್ಬರು ಈಗ ದಿನಗೂಲಿ ನೌಕರರಾಗಿ ದುಡಿಯುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿದೆ.
ಪದ್ಮಶ್ರೀ ಪುರಸ್ಕೃತರಾದ ದರ್ಶನಂ ಮೊಗಿಲಯ್ಯ ಅವರು ವಿಶೇಷ ಹಾಗೂ ಅಪರೂಪದ ಸಂಗೀತ ವಾದ್ಯಗಳಲ್ಲಿ ಒಂದಾಗಿರುವ 'ಕಿನ್ನೆರ' ವಾದನವನ್ನು ನುಡಿಸುವುದರಲ್ಲಿ ನಿಷ್ಣಾತರು. 73 ವರ್ಷದ ಅವರು ಕಿನ್ನೆರಿ ಎನ್ನುವ ವಿಶೇಷ ಸಂಗೀತ ವಾದ್ಯ ಬಳಸುವ ಮೂಲಕವೇ ದೇಶದ ಜನರ ಮನಸ್ಸು ಗೆದ್ದವರು. ಆದ್ದರಿಂದಲೇ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗಿತ್ತು.
ಸದ್ಯ ಹೈದರಾಬಾದ್ನ ಹೊರಭಾಗದಲ್ಲಿ ಈಗ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪಡೆದಾಗ, ತೆಲಂಗಾಣ ಸರ್ಕಾರ 1 ಕೋಟಿ ರೂಪಾಯಿ ನಗದು ಹಾಗೂ ನಿವೇಶನ ನೀಡುವುದಾಗಿ ಘೋಷಿಸಿತ್ತು. ಮಾತಿನಂತೆ ಒಂದು ಕೋಟಿ ರೂ. ನಗದನ್ನು ನೀಡಿತ್ತು. ಆದರೆ ಅವರು ತೆಲಂಗಾಣ ಸರ್ಕಾರದಿಂದ ಪಡೆದ 1 ಕೋಟಿ ಹಣವನ್ನು ಕುಟುಂಬದ ತುರ್ತು ಪರಿಸ್ಥಿತಿಗಳಿಗೆ ಖರ್ಚು ಮಾಡಿದ್ದಾರೆ. ಅವರ ಮಕ್ಕಳ ಮದುವೆಯನ್ನು ಅದೇ ಹಣದಲ್ಲಿ ಮಾಡಿ ಮುಗಿಸಿದ್ದಾರೆ. ಹಾಗೆಯೆ, ಹೈದರಾಬಾದ್ನ ಹೊರವಲಯದಲ್ಲಿರುವ ತುರ್ಕಯಂಜಲ್ನಲ್ಲಿ ಒಂದು ತುಂಡು ಭೂಮಿಯನ್ನು ಸಹ ಖರೀದಿಸಿದ್ದರು. ಅಲ್ಲಿಯೇ ಒಂದು ಚಿಕ್ಕ ಸೂರು ಕಟ್ಟಿಕೊಳ್ಳಬೇಕು ಎಂದು ಮನೆ ಕಟ್ಟಲು ಪ್ರಾರಂಭಿಸಿದ್ದರು. ಆದರೆ ಅವರಲ್ಲಿ ಇರುವ ಹಣಕಾಸಿನ ಕೊರತೆಯಿಂದಾಗಿ ಮನೆಯ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಬಿಟ್ಟಿದ್ದಾರೆ.
ಇನ್ನು ದರ್ಶನಂ ಮೊಗಿಲಯ್ಯ ಅವರಿಗೆ ತೆಲಂಗಾಣಾದ ಬಿಆರ್ಎಸ್ ಸರ್ಕಾರ ಹೈದರಾಬಾದ್ನ ಎಲ್ಬಿ ನಗರದಲ್ಲಿ 600 ಗಜ ಮನೆ, ನಿವೇಶನ ನೀಡುವುದಾಗಿ ಭರವಸೆ ನೀಡಿ ಜಿಒ ಹೊರಡಿಸಿತ್ತು. ಆದರೆ ಸರಕಾರದ ಆದೇಶ ಮಾತ್ರ ಕಾರ್ಯರೂಪಕ್ಕೆ ಬರಲೇ ಇಲ್ಲ. ಆಗ ಹಸಿ ಭರವಸೆ ನೀಡಿದ ಕಂದಾಯ ಅಧಿಕಾರಿಗಳು ನೀವೇಶನದ ಬಗ್ಗೆ ಪ್ರಶ್ನೆ ಮಾಡಿದರೆ ಕ್ಯಾರೆ ಎನ್ನದೆ, ಎಮ್ಮೆ ಮೈ ಮೇಲೆ ಮಳೆ ಬಿದ್ದಂತೆ ವರ್ತಿಸುತ್ತಾರೆ ಎಂದು ಸ್ವತಃ ಮೊಗಿಲಯ್ಯ ನವರು ನನ್ನ ಬಳಿ ಹೇಳಿಕೊಂಡಿದ್ದರು. ಪಟ್ಟು ಬಿಡದೆ ಹೋರಾಟ ನಡೆಸುತ್ತಿದ್ದ ಅಪ್ರತಿಮ ಕಲಾವಿದ ದರ್ಶನಂ ಅವರಿಗೆ ಸ್ಥಳೀಯ ಸಾಹಿತಿಗಳು, ಹೋರಾಟಗಾರರು ಸಹಾಯ ನೀಡಿದ್ದರು. ಸರಕಾರ ಕೊಟ್ಟ ಮಾತಿನಂತೆ ಅವರಿಗೊಂದು ನಿವೇಶನ ನೀಡಲು ಒತ್ತಾಯಿಸಿದ್ದರು.
00

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನುಅದೆಷ್ಟೋ ಬಾರಿ ಭೇಟಿ ಮಾಡಿ ತಮ್ಮ ಮನವಿಯನ್ನ ಸಲ್ಲಿಸಿದ್ದರಂತೆ. ಆದರೆ, ಅಧಿಕಾರಿಗಳಿಗೆ ಇವರ ಬಗ್ಗೆ ಕಿಂಚಿತ್ತು ಕರುಣೆ ಬಂದಿಲ್ಲ. ಇವರ ಒಬ್ಬ ಮಗ ಮೂರ್ಛೆ ರೋಗದಿಂದ ಮಾತನಾಡಲು ಸಾಧ್ಯವಾಗದ ಸ್ಥಿತಿಗೆ ಬಂದಿತ್ತು. ಆಗಲೂ ಸರಕಾರ ಇವರ ಬಗ್ಗೆ ಕಾಳಜಿ ವಹಿಸಲಿಲ್ಲ. ಆದರೆ ಆಗಿನ ತೆಲಂಗಾಣಾ ಸರ್ಕಾರದ ಸಲಹೆಗಾರ ʻಕೆ.ವಿ. ರಮಣಾಚಾರಿʼ ಅವರು ತಮ್ಮ ಸ್ವಂತ ಸಂಪಾದನೆಯ ಎರಡು ಲಕ್ಷ ರೂ. ನೀಡಿದ್ದನ್ನು ಮೊಗಿಲಯ್ಯ ನೆನೆದುಕೊಳ್ಳುವಾಗ ಕಣ್ಣಂಚಲ್ಲಿ ನೀರು ಬಂದಿತ್ತು. ಅಂತಹ ಜವಾಬ್ದಾರಿ ವ್ಯಕ್ತಿಯ ಮನವಿಗೂ ಸರಕಾರದ ಅಧಿಕಾರಿಗಳು ಕ್ಯಾರ್ ಮಾಡದಿರುವುದ ಖೇದದಿಂದಲೆ ಹೇಳಿಕೊಂಡಿದ್ದರು. ಅದರೊಂದಿಗೆ ಸ್ವತಃ ಮೊಗಿಲಯ್ಯನವರಿಗೆ ವಯೋಸಹಜ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳು ಇವೆ. ಇವರ ಮನೆಯ ಎಲ್ಲರಿಂದ ತಿಂಗಳಿಗೆ ಕನಿಷ್ಠ 12,000 ರೂಪಾಯಿ ಔಷಧಕ್ಕೆ ಬೇಕಾಗುತ್ತದೆ ಎಂದು ನನ್ನ ಬಳಿ ಅಲವತ್ತು ಕೊಂಡಿದ್ದರು. ಇಷ್ಟೊಂದು ಹೇಳಿದ ತಮ್ಮ ಪಿಂಚಣಿ ಖಾತೆಯಲ್ಲಿಕಳೆದ ಐದು ತಿಂಗಳಿಂದ ಪಿಂಚಣಿ ಜಮಾ ಆಗಲೇ ಇಲ್ಲ, ಏನು ಮಾಡಬೇಕು ಎನ್ನುವುದು ತಿಳಿಯದೆ ಹೀಗೆ ಮಾಡಬೇಕಾಯ್ತು ಎಂದು ಬೇಸರದಿಂದಲೇ ಹೇಳಿಕೊಂಡಿದ್ದರು.
ಪದ್ಮಶ್ರೀ ಬಳಿಕ ಎಲ್ಲೆಲ್ಲೂ ಫೇಮಸ್ ಆಗಿದ್ದರಲ್ಲ ನೀವು..? ಎಂದು ನಾನು ಪ್ರಶ್ನೆ ಮಾಡಿದಾಗ, ಒಪ್ಪಿಕೊಂಡ ಅವರು, "ಕಿನ್ನೆರ ನುಡಿಸಿ ಫೇಮಸ್ ಆಗಿದ್ದಕ್ಕಿಂತ, ಪದ್ಮಶ್ರೀ ಸಿಕ್ಕ ಬಳಿಕ ಎಲ್ಲೆಲ್ಲೂ ಫೇಮಸ್ ಆಗಿದ್ದು ಹೌದು" ಎಂದಿದ್ದರು. "ಆಗ ಒಂದಿಷ್ಟು ದಿನಗಳ ಕಾಲ ಎಲ್ಲಾ ವೇದಿಕೆಯಲ್ಲಿ ನನ್ನ ಕಿನ್ನೇರಿ ವಾದನ ಇರಲೇ ಬೇಕಿತ್ತು. ಆದರೆ ಅಲ್ಲಿ ಹಣ ಪಡೆಯುತ್ತಿದ್ದೆ..? ಎಂದು ಮಾತ್ರ ಕೇಳಬೇಡಿ ಗೌರವಾರ್ಥವಾಗಿ ಕೊಟ್ಟಿದ್ದನ್ನು ಪಡೆದು ಸಂಗೀತ ಕಾರ್ಯಕ್ರಮ ನೀಡುತ್ತಿರುವುದು ನನ್ನ ಕಾಯಕವಾಗಿತ್ತು" ಎಂದಿದ್ದು ನೆನಪಿಗೆ ಬಂದಿತ್ತು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಿನ್ನೆರ ಸಂಗೀತ ವಾದ್ಯ ವಾದಕ, ಜಾನಪದ ಕಲಾವಿದ ದರ್ಶನಂ ಮೊಗಿಲಯ್ಯನವರು ತನ್ನ ಸಂಗೀತ ಸೇವೆಯನ್ನು ತೆಲಗು ಚಿತ್ರರಂಗಕ್ಕೂ ನೀಡಿದ್ದರು. ತೆಲುಗಿನ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರ ʻಭೀಮ್ಲಾ ನಾಯಕ್ʼ ಚಿತ್ರದ ಶೀರ್ಷಿಕೆ ಗೀತೆಯ ಆರಂಭಿಕ ಭಾಗವನ್ನು ಸ್ವತಃ ಮೊಗಿಲಯ್ಯನವರೆ ಹಾಡಿದ್ದಾರೆ. ನಿರ್ದೇಶಕ ತ್ರಿವಿಕ್ರಮ್ ಮತ್ತು ಸಂಗೀತ ಸಂಯೋಜಕ ತಮನ್ ಅವರಿಗೆ ಮೊಗಿಲಯ್ಯನವರು ಸಂಗೀತದ ಮಹತ್ವ ತಿಳಿಸಿದ ಕಾರಣ ಅವರನ್ನೇ ಚಿತ್ರರಂಗಕ್ಕೆ ಬಳಸಿಕೊಳ್ಳಲಾಗಿತ್ತು. ಮಣ್ಣಿನ ಸೊಗಡನ್ನು ಬಹಿರಂಗ ಪಡಿಸುವ ತಾಕತ್ತು ಇರುವ ಮೊಗಿಲಯ್ಯ ಅವರು ನಿಗೂಢವಾಗಿದ್ದು ನವ್ಯ ಸಂಗೀತಕ್ಕೆ ಬಗ್ಗಿಕೊಂಡು ತಮ್ಮ ಕಿನ್ನೇರಿಯನ್ನು ಅದಕ್ಕೆ ಸರಿಸಮಾನವಾಗಿ ಬಾರಿಸಲು ನಾಲ್ಕಾರು ದಿನಗಳನ್ನೆ ತೆಗೆದು ಕೊಂಡಿದ್ದರಂತೆ.
ಮೊಗಿಲಯ್ಯ ಅವರು ಪರಿಶಿಷ್ಟ ಜಾತಿ ಮಾದಿಗರ ಉಪಪಂಗಡ ಎಂದು ವರ್ಗೀಕರಿಸಲಾದ ʻದಕ್ಕಲಿʼ ಸಮುದಾಯಕ್ಕೆ ಸೇರಿದವರು. ಈ ಜನಾಂಗ ಇಂದಿಗೂ ಸಮಾಜದಿಂದ ತುಸು ದೂರವೇ ವಾಸಿಸುವ ಅತ್ಯಂತ ಹಿಂದುಳಿದ ಸಮುದಾಯ ಎಂದು ಗುರುತಿಸಿಕೊಂಡವರು. ಈ ದಕ್ಕಲಿಗರು, ಸಾಮಾನ್ಯವಾಗಿ ತಮ್ಮ ಬದುಕಿಗೆ ಇತರ ಸಮಾಜಗಳನ್ನು ನಂಬಿದ ಇವರ ಮೂಲ ಕಸುಬು ಭಿಕ್ಷಾಟನೆ ಎನ್ನಲಾಗುತ್ತದೆ. ಅದೇ ಕಾರಣಕ್ಕೆ ಸಮುದಾಯಗಳನ್ನು ಹಾಡಿ ಹೊಗಳುತ್ತಾ ತಮ್ಮ ಹೊಟ್ಟೆಪಾಡು ಸಾಗಿಸುವ ಇವರು ಬಹುತೇಕವಾಗಿ ಸಾಂಪ್ರದಾಯಿಕ ಕಿನ್ನೇರವನ್ನು ನುಡಿಸುತ್ತಾರೆ.

ಈ ಕಿನ್ನೆರ ಎನ್ನುವ ವಾದನವು ತೀರಾ ಅಪರೂಪದ ವಾದನವಾಗಿದೆ. ಉದ್ದವಾದ ಬಿದಿರಿನ ಕೊಲಿಗೆ ಮತ್ತು ಒಣಗಿದ ಟೊಳ್ಳಾದ ಮೂರು ಕುಂಬಳಕಾಯಿಗಳನ್ನು ಕಟ್ಟಿರುವ ವಿಶೇಷ ವಾದನ. ನಾದ ಹೊರಡಿಸುವುದಕ್ಕೆ ಏಕತಾರಿಯ ಮಾದರಿಯಲ್ಲಿ ಮೂರು ತಂತಿಗಳನ್ನು ಕಟ್ಟಿರುತ್ತಾರೆ. ವಾಸ್ತವದಲ್ಲಿ ತಂತಿ ವಾದ್ಯ ಎಂದು ಗುರುತಿಸಿಕೊಂಡಿರುವ ಈ ಕಿನ್ನೆರ ವಾದನವು ನೋಡುವುದಕ್ಕೆ ಸಿಗವುದು ತೀರಾ ಅಪರೂಪ. ದಕ್ಕಲಿಗರು ತಮ್ಮ ವೃತ್ತಿ ಮತ್ತು ವಾದನದ ಬಗ್ಗೆ ಹೇಳುವಾಗ ಈ ಕಿನ್ನೆರಿ ಎನ್ನುವುದು ಸಾಂಪ್ರದಾಯಿಕ ವಾದ್ಯ, ಇಂದು ತಂತಿಗಳನ್ನು ನಾದಕ್ಕೆ ಬಳಸಲಾಗುತ್ತದೆ. ಹಿಂದೆ ಈ ತಂತಿಗಳ ಜಾಗದಲ್ಲಿ ಪ್ರಾಣಿಗಳ ನರಗಳನ್ನು ಬಳಸಿ ನಾದ ಹೊರಡಿಸಲಾಗುತ್ತಿತ್ತು ಎನ್ನುತ್ತಾರೆ. ವಾಸ್ತವದಲ್ಲಿ ಇಂದು ಆ ರೀತಿಯ ವಾದನಗಳು ಎಲ್ಲಿಯೂ ನೋಡುವುದಕ್ಕೆ ಸಿಗುತ್ತಿಲ್ಲ. ಆದರೆ ದಕ್ಕಲಿಗ ಸಮುದಾಯದ ಕೆಲವು ಹಿರಿಯರು ಇಂಥಹದೊಂದು ವಾದನ ಇತ್ತು ಎನ್ನುತ್ತಾರೆ.
ಇಂಥಹ ಅಪರೂಪದ ಜನಾಂಗದಲ್ಲಿ ಹುಟ್ಟಿ ತನ್ನ ಪೂರ್ವಿಕರು ನುಡಿಸುತ್ತ ಬಂದ ವಾದನವಾದ ಕಿನ್ನೆರಿಗೆ ರಾಷ್ಟ್ರೀಯ ಸ್ಥಾನ ಮಾನ ಕೊಟ್ಟ ಜನಪದ ಸಂಗೀತ ಸಂತ ಇಂದು ತಮ್ಮ ಜೀವನ ನಡೆಸುವುದಕ್ಕೆ ಬೀದಿಯಲ್ಲಿ ಗಾರೆ ಕೆಲಸವನ್ನು ಆಶ್ರಯಿಸಿದ್ದು ವಿಪರ್ಯಾಸ. ಅಳಿವಿನಂಚಿನ ಕಲೆಯನ್ನು ಉಳಿಸಿ, ಅದನ್ನು ಸಮಾಜಕ್ಕೆ ತೋರಿಸಿಕೊಟ್ಟ ಇವರ ನಂತರ ಈ ಕಲೆ ಮುಂದೆ ಏನು..? ಎನ್ನುವ ಕಾಲಕ್ಕೆ ಅಪರೂಪದ ಕಲಾವಿದನಿಗೆ ಅನ್ನಕ್ಕೆ ಗತಿಯಿಲ್ಲ..! ಎಂದಾಗ ಆ ಕಲೆಯನ್ನು ಕಲಿಯಿರಿ ಎಂದು ಆತ ಹೇಗೆ ತಾನೆ ಹೇಳಿಯಾನು..? ದರ್ಶನಂ ಮೊಗಿಲಯ್ಯ ಖುಷಿಯಲ್ಲಿ ಇದ್ದರೆ ಕನಿಷ್ಟ ಈ ಕಲೆಯನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿಯಾದರೂ ನೀಡುತ್ತಿದ್ದರೋ ಏನೋ..!?

ಶ್ರೀನಾಥ್ ಜೋಶಿ ಸಿದ್ದರ್
9080188081
Publisher: ಕನ್ನಡ ನಾಡು | Kannada Naadu